ವಿಜ್ಜಿಕೆ
	ಸು. 7ನೆಯ ಶತಮಾನ. ಹೆಸರಾಂತ ಸಂಸ್ಕøತ ಕವಯಿತ್ರಿ. ಈಕೆಗೆ ವಿಜ್ಜಕಾ, ವಿಜ್ಜಾಕಾ, ವಿಜ್ಜಿಕಾ, ವಿಜಾ, ಬಿಜ್ಜಕ, ವಿಜಯಾಂಬಿಕಾ ಎಂಬ ಹೆಸರುಗಳೂ ಇವೆ.

	ಈಕೆ ಬಾದಾಮಿ ಚಳುಕ್ಯವಂಶದ ಚಂದ್ರಾದಿತ್ಯನ ಹೆಂಡತಿ. ವಿಜಯಭಟ್ಟಾರಿಕಾ ಈಕೆಯೇ ಇರಬಹುದೆಂಬ ಊಹೆ ಇದೆ. 855ರಲ್ಲಿದ್ದ ಕಾಶ್ಮೀರದ ಅರಸ ಅವಂತಿವರ್ಮನ ಸಮಕಾಲೀನ ಭಟ್ಟಕಲ್ಲಟನ ಮಗ ಮುಕುಲಭಟ್ಟ ತನ್ನ ಅಭಿಧಾವೃತ್ತಿ ಮಾತೃಕ ಎಂಬ ವ್ಯಾಕರಣ ಗ್ರಂಥದಲ್ಲಿ ಈಕೆಯದೆಂದು ಹೇಳಬಹುದಾದ ಒಂದು ಶ್ಲೋಕವನ್ನು ಉದಾಹರಣೆಗಾಗಿ ಆಯ್ದುಕೊಂಡಿದ್ದಾನೆ. ವಿಜ್ಜಿಕೆಯದೇ ಎಂದು ಪ್ರಸಿದ್ಧವಾದ ಮತ್ತೊಂದು ಶ್ಲೋಕದಿಂದ ಈಕೆ ಪ್ರಸಿದ್ಧ ಸಂಸ್ಕøತ ಆಲಂಕಾರಿಕ ದಂಡಿಗಿಂತ (7ನೆಯ ಶತಮಾನ) ಈಚಿನವಳೆಂಬುದು ನಿರ್ವಿವಾದ. ರಾಜಶೇಖರ (10ನೆಯ ಶತಮಾನ) ಈಕೆಯ ಕವಿತಾಶೈಲಿಯನ್ನು ವೈದರ್ಭೀಶೈಲಿಯೆಂದು ಹೊಗಳಿದ್ದಾನೆ.

	ಕೌಮುದೀ ಮಹೋತ್ಸವ ಎಂಬ ಐದಂಕದ ಐತಿಹಾಸಿಕ ನಾಟಕ ಈಕೆಯದಿರಬಹುದೆಂಬುದು ವಿಮರ್ಶಕರ ಅಭಿಪ್ರಾಯ. ಈ ನಾಟಕದಲ್ಲಿ ಮಾಮೂಲಿನಂತೆ ರಾಜ, ಋತು, ರಸಿಕತೆ, ರಾಸಕ್ರೀಡೆ ಇತ್ಯಾದಿ ಎಲ್ಲ ವರ್ಣನೆಗಳೂ ಬಂದಿದ್ದು ರಸಪೋಷಣೆ ಪಡೆದಿವೆ. ಈ ನಾಟಕದಲ್ಲಿ ಭಾಸನಂತೆ ಸ್ಥಾಪನಾ ಎಂಬುದು ಪ್ರಸ್ತಾವನಾ ಬದಲು ಬಂದಿದೆ. ಈಕೆಯವೇ ಎಂಬ ಸುಮಾರು 30-40 ಬಿಡಿ ಪದ್ಯಗಳನ್ನು ಪ್ರಾಯಶಃ ಎಲ್ಲ ಪ್ರಸಿದ್ಧ ಆಲಂಕಾರಿಕರೂ ಉದಾಹರಿಸಿದ್ದಾರೆ. ಪದ್ಯಗಳಿಂದ ಪದ್ಯಕರ್ತೃವನ್ನು ಅಳೆಯುವುದಾದರೆ ಈಕೆ ವಿಲಾಸಪ್ರಿಯಳಂತೆ ವಿನೋದ ಪ್ರಿಯಳೂ ಪ್ರತಿಭಾನ್ವಿತಳೂ ಹೌದು. ಕವಿ ದಂಡಿ ತನ್ನನ್ನು ನೋಡಿದ್ದಲ್ಲಿ ಸರಸ್ವತಿಯನ್ನು ಸರ್ವಶುಕ್ಲಳೆನ್ನುತ್ತಿರಲಿಲ್ಲ ಎನ್ನುವಷ್ಟರಮಟ್ಟಿನ ಸ್ವಾಭಿಮಾನ ಇವಳದು.

	ವಿಜ್ಜಿಕೆ ಉತ್ತಮ ಕವಯಿತ್ರಿ. ಕುಟ್ಟುವುದು, ಕುಣಿಯುವುದು, ಹಾಡುವುದು ಮುಂತಾದ ನಿತ್ಯಜೀನವದ ಭೋಗವಿಲಾಸಗಳೇ ಈಕೆಯ ಕಾವ್ಯವಸ್ತುಗಳು.						
			(ಜಿ.ಎಮ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ